ಬೆಂಗಳೂರು, ಮೇ. ೧: ಇಂದಿನ ರಾಜಕೀಯ ವಾತಾವರಣ ಕಲುಷಿತವಾಗಲು ರಾಜಕಾರಣಿಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ವಿಷಾದಿಸಿದ್ದಾರೆ.
ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಇದಕ್ಕೆ ಕಾರಣ ಈಗಿನ ರಾಜಕಾರಣಿಗಳು ಎಂದರೆ ತಪ್ಪಲ್ಲ. ಇದರಿಂದ ಯುಪೀಳಿಗೆ ಹೋರಾಟ ಮನೋಭಾವವನ್ನು ರೂಢಿಸಿಕೊಳ್ಳು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನಗರದಲ್ಲಿ ಇಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಯುವ ಪೀಳಿಗೆ ಸೇರಿದಂತೆ ಯಾವುದೇ ರಾಜಕಾರಣಿಗಳಲ್ಲಿ ಹೋರಾಟದ ಮನೋಭಾವೇ ಇಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಮರಾಜ್ಯ ಸ್ಥಾಪನೆ ಸಾಧ್ಯವಿಲ್ಲ ಎಂದರು.
ಇಂದಿನ ಯುವ ಪೀಳಿಗೆ ಮಾನವೀಯ ಮೌಲ್ಯ ಹೊಂದಿರುವ ಪುಸ್ತಕಗಳನ್ನು ಓದುವ ಅಭ್ಯಾಸವನ್ನೇ ಇಟ್ಟುಕೊಂಡಿಲ್ಲ. ಹೀಗಾದರೆ ಯುವಪೀಳಿಗೆ ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂದ ಅವರು ಯುವ ಪೀಳಿಗೆಯ ಪುಸ್ತಕ ಹವ್ಯಾಸ ಕಡಿಮೆಯಾಗಲು ವಿದ್ಯುನ್ಮಾನ ಮಾಧ್ಯಮಗಳೇ ಕಾರಣ ಎಂದು ಕಿಡಿಕಾರಿದರು.
ಕೆಲ ಯುವಕರು ಅಪ್ಪ ಹಾಕಿದ ಆಲದ ಮರದಲ್ಲಿ ಏನಿದೆ ಎಂದು ತಾತ್ಸಾರ ಮಾಡುತ್ತಾರೆ. ಆದರೆ ಅಪ್ಪ ನೆಟ್ಟ ಆಲದ ಮರದಲ್ಲಿ ಶಕ್ತಿ ಮತ್ತು ಫಲ ಇರುತ್ತದೆ ಇದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ ಅವರು ತಾವು ಅಪ್ಪ ಹಾಕಿದ ಆಲದ ಮರದಿಂದಲೇ ಮುಂದಿನ ರಾಜಕೀಯವನ್ನು ಹಸನು ಮಾಡಲು ನಿರ್ಧರಿಸಿದ್ದೇನೆ. ಅದರಿಂದಲೇ ಉತ್ತಮ ರಾಜಕೀಯ ಭವಿಷ್ಯ ಕಂಡುಕೊಳ್ಳುತ್ತೇನೆ ಎಂದು ಹೇಳಿದರು.